ಪ್ಯಾರಿಸ್ - ನಗರ, ನದೀಬಂದರು, ಫ್ರಾನ್ಸ್ ದೇಶದ ರಾಜಧಾನಿ. ಫ್ರೆಂಚ್‍ನಲ್ಲಿ ಇದರ ಹೆಸರು ಪ್ಯಾರೀ. ಇಂಗ್ಲಿಷ್ ಕಡಲ್ಗಾಲುವೆಯ ಆಗ್ನೇಯಕ್ಕೆ, ಸೇನ್ ನದಿಯ ಎರಡೂ ದಂಡೆಗಳ ಮೇಲೆ ನದೀಮುಖದಿಂದ ಸುಮಾರು 176 ಕಿ.ಮೀ. ದೂರದಲ್ಲಿ, ಉ.ಅ. 480 50' 14" ಮತ್ತು ಪೂ.ರೇ. 200 20' 14" ಮೇಲೆ ಇದೆ. ಸೇನ್ ನದಿಯ ನಡುಗಡ್ಡೆಯಾದ ಐಲ್ ದ ಲಾ ಸಿಟಿಯ ಸುತ್ತಲೂ ಪ್ಯಾರಿಸ್ ನಗರ ಹಬ್ಬಿದೆ. ಸೇನ್ ನದಿಯ ಮೇಲೆ 32 ಸೇತುವೆಗಳಿವೆ. ಪ್ಯಾರಿಸ್ ಮಹಾನಗರದ ವಿಸ್ತೀರ್ಣ 479 ಚ.ಕಿ.ಮೀ ಜನಸಂಖ್ಯೆ 9060257 (2000) ಕೇಂದ್ರ ನಗರ ವಿಸ್ತೀರ್ಣ 105 ಚ.ಕಿ.ಮೀ ಜನಸಂಖ್ಯೆ 21,75,200 (2000). ನಗರದ ಯಾವ ಮೂಲೆಯೂ ನಾಟ್ರ್‍ಡೇಮ್ ಪ್ರಾರ್ಥನ ಮಂದಿರದ ಎದುರಿಗಿನ ಚೌಕದಿಂದ 10 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿಲ್ಲ. ಪ್ಯಾರಿಸ್ ಪ್ರಪಂಚದ ಸುಪ್ರಸಿದ್ಧ ಹಾಗೂ ಅತ್ಯಂತ ಸುಂದರ ನಗರಗಳಲ್ಲೊಂದು. ಶತಮಾನಗಳಿಂದ ಒಂದರ ಹಿಂದೊಂದು ಅಧಿಪತ್ಯಗಳು ನಗರವನ್ನು ಬೆಳೆಸಲು ಹೆಚ್ಚು ಹೆಚ್ಚು ಸುಂದರವಾಗಿ ಮಾಡಲು ಪ್ರಯತ್ನಿಸುತ್ತಲೇ ಬಂದಿವೆ. ನಗರ ಬೆಳೆಯುತ್ತಾ ಬಂದಂತೆ ಹಿಂದಿನ ಸಂಪ್ರದಾಯವನ್ನೂ ಉಳಿಸಿಕೊಂಡು ಬಂದಿದೆ. ಕಲೆ, ಪಾಂಡಿತ್ಯ, ಸಂಸ್ಕøತಿ ಮತ್ತು ಇಂದ್ರಿಯ ಭೋಗಗಳಿಗೆ ಪ್ಯಾರಿಸ್ ಪ್ರಸಿದ್ಧವಾದ ನಗರ. ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಪ್ರವಾಸಿಗಳು ಪ್ಯಾರಿಸ್ಸಿಗೆ ಭೇಟಿ ಕೊಡುತ್ತಾರೆ. ಇಲ್ಲಿಯ ವಿಶ್ವವಿದ್ಯಾಲಯ ಮತ್ತು ಕಲಾಶಾಲೆಗಳಲ್ಲಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಮತ್ತು ಕಲೋಪಾಸಕರು ಇಲ್ಲಿಗೆ ಬರುತ್ತಾರೆ. ಬರಹಗಾರರು ಮತ್ತು ವರ್ಣಚಿತ್ರಕಾರರು ಜೀವನ ನಡೆಸುವುದಕ್ಕೂ ಹವ್ಯಾಸ ಮುಂದುವರಿಸುವುದಕ್ಕೂ ಇಲ್ಲಿಗೆ ಬರುತ್ತಾರೆ. ವಿಲಾಸಿಗಳು ಭೋಗವನ್ನರಸಿ ಇಲ್ಲಿಗೆ ಬಂದರೆ ಪ್ರವಾಸಿಗಳು ಜಗತ್ಪ್ರಸಿದ್ಧ ಕಟ್ಟಡ, ಚೌಕ ಮತ್ತು ಸ್ಮಾರಕಗಳನ್ನು ನೋಡಿ ಆನಂದಿಸಲು ಬರುತ್ತಾರೆ. ಸಾಲು ಮರಗಳಿಂದ ಕೂಡಿದ ವಿಶಾಲ ಬೀದಿಗಳು, ಅಂದವಾಗಿ ಸುವ್ಯವಸ್ಥಿತವಾದ ಚೌಕಗಳು, ಯೋಜನಾಬದ್ಧ ಉದ್ಯಾನಗಳು ಮತ್ತು ತೋಟಗಳು, ಗಮನ ಸೆಳೆಯುವ ಕಟ್ಟಡಗಳು ಮತ್ತು ಸ್ಮಾರಕಗಳು ಒಂದುಗೂಡಿ ಪ್ಯಾರಿಸನ್ನು ವಿಶಿಷ್ಠ ನಗರವಾಗಿ ಮಾಡಿವೆ. ದೀರ್ಘಕಾಲದಿಂದ ಇದು ಪ್ರಪಂಚದ ಮಹಿಳೆಯರ ಶೈಲಿ ಸಂಪ್ರದಾಯಗಳ ಕೇಂದ್ರವಾಗಿದ್ದುಕೊಂಡು ಅವುಗಳ ಮೇಲೆ ಪ್ರಭಾವ ಬೀರುತ್ತ ಬಂದಿದೆ. ಉತ್ತಮ ಊಟ ತಿಂಡಿ ಒದಗಿಸುವ ಭೋಜನ ಮಂದಿರಗಳಿಗೂ ಮನೋರಂಜನೆ ನೀಡುವ ವಿಹಾರ ಮಂದಿರಗಳಿಗೂ ನಾಟಕ ಗೃಹಗಳಿಗೂ ಪ್ಯಾರಿಸ್ ಪ್ರಸಿದ್ಧವಾಗಿದೆ. ಪ್ಯಾರಿಸನ್ನು ಬೆಳಕಿನ ನಗರ, ಪ್ರಪಂಚದ ರಾಜಧಾನಿ, ಹೂ ಮುಡಿದ ತುರುಬಿನ ಮಹಿಳೆಯಂತೆ ಕಂಗೊಳಿಸುವ ನಗರ ಎಂದು ಮುಂತಾಗಿ ವರ್ಣಿಸುವುದುಂಟು. ಪ್ಯಾರಿಸಿ ಎಂಬ ಕೆಲ್ಟ್ ಬುಡಕಟ್ಟಿನಿಂದಾಗಿ ನಗರಕ್ಕೆ ಈ ಹೆಸರು ಪ್ರಾಪ್ತವಾಗಿದೆ.
ಭೌಗೋಳಿಕ ವಿವರ: ವಾಸ್ó, ಮಾರ್ನ್ ಮತ್ತು ಯಾನ್ ನದಿಗಳು ಸೇನ್ ನದಿಯನ್ನು ಸೇರುವ ಪ್ರದೇಶದಲ್ಲಿ ಶೇಖರವಾದ ಎರೆಮಣ್ಣಿನ ಫಲವತ್ತಾದ ತಗ್ಗು ಕೃಷಿಭೂಮಿಯ ಮಧ್ಯದಲ್ಲಿ ಈ ನಗರವಿದೆ. ಈ ತಗ್ಗು ನೆಲ ಪ್ಯಾರಿಸ್ ಬೋಗುಣಿ ಎಂದೇ ಪ್ರಸಿದ್ಧವಾಗಿದೆ. ಪೂರ್ವದಿಂದ ಪಶ್ಚಿಮಕ್ಕೆ ಪ್ರಶಾಂತವಾಗಿ ಹರಿಯುವ ಸೇನ್ ನದಿ ಈ ನಗರವನ್ನು ಹಾದು ಮುಂದೆ ಹೋಗುವಾಗ ಉತ್ತರಕ್ಕೆ ತಿರುಗುತ್ತದೆ. ಬಲದಂಡೆಯ (ಉತ್ತರದ) ನಗರ ಭಾಗವನ್ನು ಗುಡ್ಡಗಳು ಸುತ್ತುವರಿದಿವೆ. ಎಡದ ದಂಡೆಯ ಮೇಲೂ ಗುಡ್ಡಗಳಿವೆ. ಉಪನಗರಗಳ ಉನ್ನತ ಪ್ರದೇಶದಲ್ಲಿ ಒಂದು ಕಾಲದಲ್ಲಿ ಕೋಟೆಗಳಿದ್ದುವು. ಗುಡ್ಡಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ಪ್ಯಾರಿಸಿನದು ಸಮಶೀತೋಷ್ಣದ ಸಾಗರಿಕ ವಾಯುಗುಣ. ಇಲ್ಲಿಯ ಮಧ್ಯ ಉಷ್ಣತೆ ಸುಮಾರು 10.250ಛಿ. ಫೆಬ್ರವರಿ ಮತ್ತು ಜುಲೈ ತಿಂಗಳುಗಳ ಮಧ್ಯ ಉಷ್ಣತೆಗಳು ಅನುಕ್ರಮವಾಗಿ 2.50ಛಿ ಮತ್ತು 18.50ಛಿ. ಸಾಮಾನ್ಯವಾಗಿ ವರ್ಷದಲ್ಲಿ 15 ದಿನಗಳ ಕಾಲ ಇಲ್ಲಿ ಹಿಮ ಬೀಳುತ್ತದೆ. ಪ್ಯಾರಿಸಿನದು ಫ್ರಾನ್ಸಿನ ಶುಷ್ಕವಲಯಗಳಲ್ಲೊಂದು. ವರ್ಷದ ಸರಾಸರಿ ಮಳೆ 558 ಮಿ.ಮೀ. ಸೇನ್ ನದಿ, ಅದರ ದಂಡೆಯ ಮೇಲಿನ ಹಾಗೂ ವಿಸ್ತಾರವಾದ ರಸ್ತೆಗಳ ಅಂಚುಗಳ ಮರಗಳು, ಉದ್ಯಾನಗಳು ಮತ್ತು ತೋಟಗಳು ಇವುಗಳಿಂದಾಗಿ ನಗರದಲ್ಲಿ ನಿಜವಾಗಿ ಇರುವುದಕ್ಕಿಂತಲೂ ಹೆಚ್ಚು ಹಸಿರುತೆರವು ಪ್ರದೇಶಗಳಿವೆ ಎಂಬ ಭಾವನೆ ಉಂಟಾಗುತ್ತದೆ. 

ಇತಿಹಾಸ: ಪ್ಯಾರಿಸಿಗೆ 1951 ರಲ್ಲಿ 2,000 ವರ್ಷಗಳು ಪೂರ್ತಿಯಾದವು. ಪ್ಯಾರಿಸಿನ ಮೊತ್ತಮೊದಲನೆಯ ದಾಖಲೆ ಜ್ಯೂಲಿಯಸ್ ಸೀಸರನ ಗಾಲಿಕ್ ಯುದ್ಧಗಳ ಇತಿಹಾಸದಲ್ಲಿ ಕಂಡುಬರುತ್ತದೆ. ಅವನು ಅದನ್ನು ಲೂಟೀಷಿಯ ಎಂದು ಕರೆದ. ಆ ಕಾಲದಲ್ಲಿ ಅದು ಐಲ್ ದ ಲಾ ಸಿಟಿಯನ್ನು (ನಗರದ ದ್ವೀಪ) ಆವರಿಸಿತ್ತು. ಅಲ್ಲಿ ಮೀನುಗಾರರು ವಾಸಿಸುತ್ತಿದ್ದರು. ರೋಮನ್ನರ ಆಶ್ರಯದಲ್ಲಿ ಸೇನ್ ನದಿಯ ಎಡದಂಡೆಗೆ ವಸತಿ ವಿಸ್ತರಿಸಿತು. ಈ ದಂಡೆಯ ಮೇಲೆ ರೋಮನ್ನರ ಸ್ನಾನಗೃಹದ ಮತ್ತು ಒಂದು ದೊಡ್ಡ ನಾಟಕ ಮಂದಿರದ ಅವಶೇಷಗಳು ಸಿಕ್ಕಿವೆ. ಕ್ರಿ.ಶ. 300 ರ ಸುಮಾರಿಗೆ ಅಲ್ಲಿ ವಾಸಿಸುತ್ತಿದ್ದ ಪ್ಯಾರಿಸ್ ಎಂಬ ಕೆಲ್ಟ್ ಜನಾಂಗದಿಂದಾಗಿ ಇದಕ್ಕೆ ಪ್ಯಾರಿಸ್ ಎಂಬ ಹೆಸರು ಬಂತು. ಲೂಟೀಷಿಯ ಎಂಬುದು ಈಗ ಕವಿಗಳು ಬಳಸುವ ಹೆಸರಾಗಿ ಉಳಿದಿದೆ. ಫ್ರ್ಯಾಂಕರ ದೊರೆ ಕ್ಲೋವಿಸ್ 508 ರಲ್ಲಿ ಪ್ಯಾರಿಸನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. ಮಧ್ಯಯುಗದಲ್ಲಿ ನಗರದ ವಿಸ್ತೀರ್ಣ ಮತ್ತು ಮಹತ್ವ ಹೆಚ್ಚಿದುವು. ಮುಂದೆ ಫ್ರಾನ್ಸಿನ ದೊರೆಗಳ ಪ್ರಾಬಲ್ಯ ಕುಗ್ಗಿದಾಗ ಪ್ಯಾರಿಸಿನ ರಕ್ಷಣೆಯನ್ನು ನಗರದ ಕಾಂಟ್ ಮತ್ತು ಶ್ರೀಮಂತ ವರ್ತಕರು ವಹಿಸಿಕೊಂಡಿದ್ದರು. 1180 ರಿಂದ 1223 ರ ವರೆಗಿನ ಫಿಲಿಪ್ ಆಗಸ್ಟನ ಆಳ್ವಿಕೆಯಲ್ಲಿ ಪ್ಯಾರಿಸ್ ಬಹಳ ಅಭಿವೃದ್ಧಿ ಹೊಂದಿತು. ಅವನು ನಗರದ ಸುತ್ತ ಗೋಡೆಯನ್ನು ಕಟ್ಟಿಸಿದ. ಅದು ಮುಂದಿನ ಎರಡು ಶತಮಾನಗಳ ಕಾಲ ನಗರಕ್ಕೆ ರಕ್ಷಣೆ ನೀಡಿತು. ಅವನ ಕಾಲದಲ್ಲೇ ಪ್ಯಾರಿಸ್ ವಿಶ್ವವಿದ್ಯಾಲಯ ಆರಂಭವಾಯಿತು: ನಾಟ್ರ್‍ಡೇಮ್ ಆರಾಧನ ಮಂದಿರದ ಅಧಿಕ ಭಾಗ ಪೂರ್ತಿಯಾಯಿತು. ಅನಂತರದ ಅರಸರ ಆಳ್ವಿಕೆಗಳ ಕಾಲದಲ್ಲಿ ಸುತ್ತಣ ಗೋಡೆಗಳನ್ನು ದಾಟಿ ನಗರ ಬೆಳೆಯಿತು. 14 ನೆಯ ಶತಮಾನದ ವೇಳೆಗೆ ನಗರದ ಮೂರು ಭಾಗಗಳು ತಂತಮ್ಮವೇ ಆದ ವೈಶಿಷ್ಟ್ಯ ಗಳಿಸಿದ್ದುವು. ಮಧ್ಯದ ಭಾಗ ಐಲ್ ದ ಲಾ ಸಿಟಿ ಧಾರ್ಮಿಕ ಹಾಗೂ ಆಡಳಿತ ಕೇಂದ್ರವಾಗಿತ್ತು. ವಿಶ್ವವಿದ್ಯಾಲಯ ಪ್ರಧಾನವಾಗಿದ್ದ ಎಡ ದಂಡೆ ವಿದ್ವಾಂಸರ ನೆಲೆಯಾಗಿತ್ತು. ಬಲದಂಡೆಯ ಮೇಲೆ ವರ್ತಕರು ಪ್ರಧಾನರಾಗಿದ್ದರು. ಆ ಶತಮಾನದಲ್ಲಿ ಅನೇಕ ಸಾರ್ವಜನಿಕ ಸುಧಾರಣೆಗಳಾದುವು. 1589 ರಿಂದ 1610 ರ ವರೆಗೆ ಆಳಿದ ಬೂರ್ಬನ್ ದೊರೆಗಳಲ್ಲಿ ಮೊದಲಿಗನಾದ 4 ನೆಯ ಹೆನ್ರಿ ಪ್ಯಾರಿಸಿನ ರೂಪವನ್ನು ಬದಲಾಯಿಸಿದ. ಅದನ್ನು ಪೂರ್ತಿಗೊಳಿಸಿದ ಪಾಂಟ್ ನ್ಯೂಫ್ (ಹೊಸ ಸೇತುವೆ) ಪ್ಯಾರಿಸಿನ ಜೀವನ ಕೇಂದ್ರವಾಯಿತು. ಇವನು ಎರಡೂ ದಂಡೆಗಳ ಮೇಲಿನ ನಗರ ಭಾಗ ಮತ್ತು ಹತ್ತಿರದ ಪ್ರದೇಶಗಳನ್ನು ಪುನಃ ರೂಪಿಸಿದನಲ್ಲದೆ ನಗರಕ್ಕೆ ನೀರನ್ನು ಒದಗಿಸುವ ವ್ಯವಸ್ಥೆಯನ್ನೂ ಸ್ಥಾಪಿಸಿದ. 17 ನೇ ಮತ್ತು 18 ನೇ ಶತಮಾನಗಳಲ್ಲಿ ಪ್ಯಾರಿಸ್ ತೀವ್ರಗತಿಯಲ್ಲಿ ಬೆಳೆಯಿತು. ಅನೇಕ ಉಪನಗರಗಳು ಸೇರಿಕೊಂಡವು. ಬೀದಿಗಳು ಅಗಲವಾದುವು. ಬೀದಿ ದೀಪಗಳು ಬಂದುವು. ಬೀದಿಗಳ ಅಂಚುಗಳಲ್ಲಿ ಗಿಡಗಳನ್ನು ನೆಡಲಾಯಿತು. ಚಾಂಪ್ಸ್ ಎಲಿಸೀ ಹಾಗೂ ಪ್ಲೇಸ್ ದಲಾ ಕನ್‍ಕಾರ್ಡ್ ಮೊದಲಾದ ಅನೇಕ ಚೌಕಗಳಿಗೆ ತಳಹದಿ ಹಾಕಲಾಯಿತು. ಎರಡು ತಗ್ಗಾದ ದ್ವೀಪಗಳನ್ನು ಜೋಡಿಸಿ ಸೇಂಟ್ ಲೂಯಿ ದ್ವೀಪವನ್ನು ರೂಪಿಸಲಾಯಿತು. ಅವುಗಳ ಮೇಲೆ ಸುಂದರ ಭವನಗಳನ್ನು ಕಟ್ಟಲಾಯಿತು. ಅವು ಇಂದಿಗೂ ಉಳಿದಿವೆ. 1789 ರಿಂದ 1795 ರ ವರೆಗಿನ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಕಟ್ಟಡಗಳ ನಿರ್ಮಾಣ ನಿಂತಿತು. ಒಂದನೆಯ ನೆಪೋಲಿಯನ್ ನಗರದ ಚೆಲುವನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡ. ಅವನು ಮಾರುಕಟ್ಟೆಗಳ ನಿರ್ಮಾಣಕ್ಕೆ ಆದೇಶ ನೀಡಿದ. ಆರ್ಕ್ ದ ಟ್ರ್ಯೆಯಂಫನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸಿದ. ಅದು 1836 ರಲ್ಲಿ ಲೂಯಿಫಿಲಿಫ್‍ನ ಕಾಲದಲ್ಲಿ ಪೂರ್ತಿಗೊಂಡಿತು. ನೆಪೋಲಿಯನ್ ಇನ್ನೂ ಅನೇಕ ಹೊಸ ಕಟ್ಟಡಗಳು, ಸಾರ್ವಜನಿಕ ಉದ್ಯಾನಗಳು, ಕಮಾನುಗಳು, ಸೇತುವೆಗಳು ಮತ್ತು ಇತರ ನಿರ್ಮಾಣಗಳ ಯೋಜನೆಯನ್ನು ತಯಾರಿಸಿದನಾದರೂ ಅವುಗಳಲ್ಲಿ ಹಲವನ್ನೂ ಪೂರ್ತಿಗೊಳಿಸಲು ಅವನಿಗೆ ಸಾಧ್ಯವಾಗಲಿಲ್ಲ. ನೆಪೋಲಿಯನ್ ಪ್ರಾರಂಭಿಸಿದ ಅನೇಕ ಸ್ಮಾರಕಗಳನ್ನು ಲೂಯಿಫಿಲಿಪ್ ಪೂರ್ತಿಗೊಳಿಸಿದ. 3 ನೆಯ ನೆಪೋಲಿಯನ್ 1852 ರಲ್ಲಿ ಪಟ್ಟಕ್ಕೆ ಬಂದ. ಪ್ಯಾರಿಸ್ ಇಂದಿನ ರೂಪ ತಳೆಯಲು ಅವನು ಬಹಳ ಮಟ್ಟಿಗೆ ಕಾರಣ ಅವನ ಕಾಲದಲ್ಲಿ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಅವನು ಅಗಲ ಮತ್ತು ನೇರ ಮಾರ್ಗಗಳನ್ನು ರಚಿಸಿ ಕ್ರಾಂತಿ ಹೆಚ್ಚು ಕಠಿಣವಾಗುವಂತೆ ಮಾಡಿದ. ಅನೇಕ ನಾಟಕಗೃಹಗಳು, ಆಸ್ಪತ್ರೆಗಳು, ಆರಾಧನ ಮಂದಿರಗಳು, ಬ್ಯಾಂಕುಗಳು, ರೈಲು ನಿಲ್ದಾಣಗಳು ಅವನ ಕಾಲದಲ್ಲಿ ನಿರ್ಮಿತವಾದುವು. 1853 ರಿಂದ ಸೇನ್‍ನ ಪೋಲಿಸ್ ಮುಖ್ಯಾಧಿಕಾರಿಯಾಗಿದ್ದ ಬ್ಯಾರನ್ ಹಾಸ್ಮನ್ ಸ್ವತಃ ಅನೇಕ ಸುಧಾರಣೆಗಳಿಗೆ ಕಾರಣವಾದ. ಅವನಿಂದ ಮಧ್ಯಯುಗದ ಅವಶೇಷಗಳು ನಿರ್ಮೂಲವಾದವು. ಇಪ್ಪತ್ತೆರಡು ಹೊಸ ಬೀದಿಗಳು ಮತ್ತು ಮಾರ್ಗಗಳು ನಿರ್ಮಿತವಾದುವು. ಫ್ರಾನ್ಸ್-ಪ್ರಷ್ಯ ಯುದ್ಧದ ಕಾಲದಲ್ಲಿ, ಸೆಪ್ಟೆಂಬರ್ 1870 ರಿಂದ ಜನವರಿ 1871 ರ ವರೆಗೆ ಜರ್ಮನರು ಪ್ಯಾರಿಸಿಗೆ ಮುತ್ತಿಗೆ ಹಾಕಿದಾಗ ಅದು ಗುಂಡಿನ ಮಳೆ, ನಷ್ಟ ಮತ್ತು ಕ್ಷಾಮಗಳಿಗೆ ಒಳಗಾಗಿ ಕೊನೆಯಲ್ಲಿ ಜರ್ಮನರ ವಶವಾಯಿತು. 1871 ರಿಂದ 1879 ರ ವರೆಗೆ ವರ್ಸೇಲ್ಸ್ ಫ್ರಾನ್ಸಿನ ರಾಜಧಾನಿಯಾಗಿತ್ತು. ಅನಂತರ ಪ್ಯಾರಿಸ್ ಮತ್ತೆ ರಾಜಧಾನಿಯಾಯಿತು. 1889 ರಲ್ಲಿ ಸು. 300 ಮೀಟರ್ ಎತ್ತರದ ಕಬ್ಬಿಣದ ಐಫಲ್ ಗೋಪುರ ನಿರ್ಮಾಣವಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನ್ನರ ದೂರವ್ಯಾಪ್ತಿಯ ಫಿರಂಗಿಗಳಿಂದ ಪ್ಯಾರಿಸ್ ಸ್ವಲ್ಪ ನಷ್ಟ ಅನುಭವಿಸಿತು. ಆದರೆ, ಅದು ಜರ್ಮನರ ವಶವಾಗಲಿಲ್ಲ. ಯುದ್ಧದ ಅನಂತರ ಶಾಂತಿ ಸಮ್ಮೇಳನದ ಸಭೆಗಳು ವರ್ಸೇಲ್ಸ್ ನಲ್ಲಿ ಸೇರಿದರೂ ಸಮ್ಮೇಳನದ ಮುಖ್ಯ ಕಾರ್ಯಾಲಯ ಪ್ಯಾರಿಸಿನಲ್ಲಿತ್ತು. ಎರಡನೆಯ ಮಹಾಯುದ್ಧದ ಕಾಲಕ್ಕೆ 1940 ರಲ್ಲಿ ಯಾವ ಪ್ರತಿಭಟನೆಯೂ ಇಲ್ಲದೆ ಜರ್ಮನ್ನರು ಅದನ್ನು ಆಕ್ರಮಿಸಲು ಬಿಟ್ಟಿದ್ದರಿಂದ ನಗರಕ್ಕೆ ವಿಶೇಷ ಹಾನಿಯುಂಟಾಗಲಿಲ್ಲ. ಫ್ರೆಂಚ್ ಸರ್ಕಾರ ವಿಚಿಗೆ ವರ್ಗವಾಯಿತು. ಅದರೆ, ಜರ್ಮನರು ಪ್ಯಾರಿಸನ್ನು ಆಕ್ರಮಿತ ಫ್ರಾನ್ಸಿನ ಕೇಂದ್ರವಾಗಿ ಉಪಯೋಗಿಸಿಕೊಂಡರು. ಪ್ಯಾರಿಸ್ ಜರ್ಮನರ ವಿರುದ್ಧ ಭೂಗತ ಅಂದೋಲನದ ಮುಖ್ಯ ಸ್ಥಾನವಾಯಿತು. 1944 ರ ಆಗಸ್ಟ್‍ನಲ್ಲಿ ಮಿತ್ರರಾಷ್ಟ್ರಗಳ ಸೈನ್ಯಗಳು ಜರ್ಮನಿ ಪಡೆಗಳನ್ನು ಫ್ರಾನ್ಸಿನಿಂದ ಹೊರಗೋಡಿಸುತ್ತಿದ್ದಾಗ ಪ್ಯಾರಿಸಿನ ಭೂಗತ ಪಡೆಗಳು ನಗರವನ್ನು ಮುಕ್ತಗೊಳಿಸಿದವು. 1946 ರ ಜುಲೈ ತಿಂಗಳಲ್ಲಿ ವಿಜಯಿ ಮಿತ್ರರಾಷ್ಟ್ರಗಳ ಪ್ರತಿನಿಧಿಗಳು ಶಾಂತಿಷರತ್ತುಗಳನ್ನು ಚರ್ಚಿಸಲು ಪ್ಯಾರಿಸ್‍ನಲ್ಲಿ ಸಭೆ ಸೇರಿದರು. 1948 ರಲ್ಲಿ ವಿಶ್ವವಿದ್ಯಾಲಯ ಮಹಾಸಭೆ ಪ್ಯಾರಿಸ್‍ನಲ್ಲಿ ಸೇರಿತು. 1950 ರ ದಶಕದ ಪ್ರಾರಂಭದ ವರ್ಷಗಳಲ್ಲಿ ಇಲ್ಲಿ ನೇಟೋ ಮತ್ತು ಯುನೆಸ್ಕೋಗಳ ಕಟ್ಟಡಗಳು ಪೂರ್ತಿಗೊಂಡವು.

ನಗರ ವರ್ಣನೆ: ಪ್ಯಾರಿಸ್ ಸುಯೋಜಿತ ಮತ್ತು ಸುನಿರ್ಮಿತ ನಗರ. ನೂರಾರು ವರ್ಷಗಳಿಂದ ಅದು ಯೋಜನಾಬದ್ಧವಾಗಿ ಬೆಳೆಯುತ್ತ ಬಂದಿದೆ. ಬೇರೆ ಬೇರೆ ಕಾಲಗಳಲ್ಲಿ ನಗರ ರಕ್ಷಣೆಗಾಗಿ ಕಟ್ಟಲಾಗಿದ್ದ ದಿಬ್ಬಗಳಿದ್ದಲ್ಲಿ ಈಗ ಸಾಲು ಮರಗಳಿಂದ ಕೂಡಿದ ವಿಶಾಲ ಬೀದಿಗಳಿವೆ. ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಹೋಗುವ ಉದ್ದನೆಯ ನದಿಗಳು ನಗರದ ದ್ವೀಪದ ಹತ್ತಿರ ಕೂಡುತ್ತವೆ. ಅನೇಕ ಅಗಲವಾದ ಮಾರ್ಗಗಳು ನಗರದೊಳಗಿನಿಂದ ಹಾಯುತ್ತವೆ. ಈ ಸ್ವಚ್ಛ ಮಾರ್ಗಗಳ ಬದಿಗಳಲ್ಲಿ ಚೆಸ್‍ನಟ್ ಮರಗಳೂ ಪಕ್ಕದ ದಾರಿಗಳಲ್ಲಿ ಉಪಹಾರದ ಅಂಗಡಿಗಳೂ ಇವೆ. ಸೇನ್ ನದಿಯ ಉದ್ದಕ್ಕೆ ಎರಡು ಬದಿಗಳಲ್ಲಿ ಕಲ್ಲಿನ ಏರಿಗಳಿವೆ. ಈ ಏರಿಗಳ ಗುಂಟ ಸಾಲುಮರಗಳುಳ್ಳ ಬೀದಿಗಳಿವೆ. ನಗರದಲ್ಲಿ ಎಲ್ಲೆಲ್ಲೂ ದೊಡ್ಡ ದೊಡ್ಡ ಉದ್ಯಾನಗಳು, ಹಸಿರು ಮೈದಾನಗಳು ಮತ್ತು ತೋಟಗಳು ಹರಡಿಕೊಂಡಿವೆ. ದಟ್ಟವಾದ ಮರಗಳು, ಮೃಗಾಲಯ, ಜಲಾಶಯ, ಉಪಾಹಾರ ಮಂದಿರ ಮತ್ತು ಆಟದ ಮೈದಾನಗಳನ್ನು ಒಳಗೊಂಡಿರುವ 2,250 ಎಕರೆ ವಿಸ್ತೀರ್ಣದ ಬೋಲೋನ್ ಉದ್ಯಾನ ಈ ನಗರದ ಪಶ್ಚಿಮ ಭಾಗದಲ್ಲಿದೆ. ಹಿಂದಿನ ಕಾಲದಲ್ಲಿ ಇದು ರಾಜಮನೆತನ ಮೃಗಯಾಲ ವಿಹಾರ ಸ್ಥಳವಾಗಿತ್ತು. ಇದರ ಹತ್ತಿರ ಕುದುರೆ ಪಂದ್ಯದ ಎರಡು ಜಾಡುಗಳಿವೆ. ವಿಯೆನ್ನ ಉದ್ಯಾನ ಇರುವುದು ಪೂರ್ವ ಭಾಗದಲ್ಲಿ ಮಾಂಕ್ಯೂ ಮತ್ತು ಬುಟ್ ಷೂಮಾನ್ ಉದ್ಯಾನಗಳು ಮತ್ತು ಟ್ಯೂಲಿರೀ ಉಪವನ ಸೇನ್ ನದಿಯ ಬಲದಂಡೆಯ ಮೇಲಿವೆ. ಚ್ಯಾಂಪ್ ದ ಮಾರ್ಸ್‍ನಲ್ಲಿ ಪ್ರಸಿದ್ಧ ಐಫಲ್ ಗೋಪುರವಿದೆ. ಮುಂದೆ ಪೂರ್ವಕ್ಕೆ, ನದಿಯ ಗುಂಟ ಹಿಂದೆ ವೃದ್ಧ ಯೋಧರ ಶುಶ್ರೂಷೆಯ ಗೃಹವಾಗಿದ್ದ, ನೆಪೋಲಿನ್ನನ 

ಗೋರಿಯನ್ನೊಳಗೊಂಡಿರುವ ಹೋಟೆಲ್ ದ ಇನ್‍ವ್ಯಾಲಿಡೆಯ ವಿಶಾಲ ಮೈದಾನವಿದೆ. ಪ್ಲೇಸ್ ದ ಲಾ ಕನ್‍ಕಾರ್ಡ್ ಎಂಬ ಚೌಕ ಸೇನ್ ನದಿಯ ಬಲದಂಡೆಯ ಮೇಲೆ ನಗರ ಮಧ್ಯದಲ್ಲಿದೆ. ಇಲ್ಲಿ ಈಜಿಪ್ಟಿಯನ್ ಓಬೆಲಿಸ್ಕ್ ಸ್ತಂಭ ಕಾರಂಜಿಗಳು ಮತ್ತು ಎರಡು ಅರಮನೆಗಳಿವೆ. ಈ ಚೌಕ 18 ನೆಯ ಶತಮಾನದಲ್ಲಿ 15 ನೆಯ ಲೂಯಿಯ ಕಾಲದಲ್ಲಿ ನಿರ್ಮಿತವಾಯಿತು. ಸಾಲುಮರಗಳಿರುವ ಚ್ಯಾಂಪ್ಸ್ ಎಲಿಸೀ ಎಂಬ ಅಗಲ ಮಾರ್ಗ ಕನ್‍ಕಾರ್ಡ್ ಚೌಕದಿಂದ ಇಟಾಲಿಯನ್ ಚೌಕಕ್ಕೆ ಹೋಗುತ್ತದೆ. ಈ ಚೌಕದಲ್ಲಿ 12 ವಿಶಾಲ ಅಗಲ ವರ್ಗಗಳು ಕೂಡುತ್ತವೆ. ಇಲ್ಲಿ ನೆಪೋಲಿಯನ್ನನ ವಿಜಯಗಳ ಸ್ಮಾರಕವಾಗಿ ಕಟ್ಟಲಾದ ವಿಜಯ ಕಮಾನು ಪ್ರಪಂಚದಲ್ಲೇ ಅತ್ಯಂತ ದೊಡ್ಡದು. ಇದರ ಕೆಳಗೆ ಒಂದನೆಯ ಮಹಾಯುದ್ಧದ ಫ್ರಾನ್ಸಿನ ಅಜ್ಞಾತ ಯೋಧನ ಸ್ಮಾರಕವಿದೆ. ಅಲ್ಲಿ ಅವನ ಗೌರವಾರ್ಥಕವಾಗಿ ಒಂದು ಜ್ವಾಲೆ ಯಾವಾಗಲೂ ಉರಿಯುತ್ತಿದೆ. ಕನ್‍ಕಾರ್ಡ್ ಚೌಕದ ಪೂರ್ವಕ್ಕೆ ಕೆಲವು ವಠಾರಗಳ ಅಂತರದಲ್ಲಿ ವೆಂಡೋಮ್ ಚೌಕ ಮತ್ತು ಕ್ಯಾಸೆಲ್ ಚೌಕಗಳಿವೆ. ಬಾಸ್ಟೀಲ್ ಚೌಕದ ಮಧ್ಯದಲ್ಲಿರುವ ಸ್ತಂಭ 1830 ರ ಜುಲೈ ಕ್ರಾಂತಿ ಮತ್ತು ಅದಕ್ಕೆ ತುತ್ತಾದವರ ಸ್ಮರಣಾರ್ಥಕವಾಗಿ ನಿರ್ಮಿತವಾದ್ದು. ಪ್ಯಾರಿಸಿನ ಇತರ ಪ್ರಸಿದ್ಧ ಚೌಕಗಳಲ್ಲಿ ಗಣರಾಜ್ಯ ಚೌಕ, ರಾಷ್ಟ್ರೀಯ ಚೌಕ ಮತ್ತು ಸಂತ ಮೈಕೇಲನ ಚೌಕ ಮುಖ್ಯವಾದವು. ಪ್ಯಾರಿಸ್ ಅನೇಕ ಪ್ರಸಿದ್ಧ ಕಟ್ಟಡಗಳಿರುವ ನಗರ. ಹಿಂದೆ ಮೆಡೇಂ ಪಾಂಪಡೂರಳ ವಾಸಸ್ಥಾನವಾಗಿದ್ದ ಎಲಿಸೀ ಅರಮನೆ 1848 ರಿಂದ ಫ್ರಾನ್ಸಿನ ಗಣರಾಜ್ಯದ ಅಧ್ಯಕ್ಷನ ನಿರ್ವಾಸವಾಗಿದೆ. ಅದು ಕನ್‍ಕಾರ್ಡ್ ಚೌಕದ ಪಶ್ಚಿಮಕ್ಕಿದೆ. ಲೌವ್ರ್ ಅರಮನೆಯಲ್ಲಿ ಕಲಾವಸ್ತು ಸಂಗ್ರಹವಿದೆ. ಅದು ಪುನರುಜ್ಜೀವನ ವಾಸ್ತುಶಿಲ್ಪದ ಒಳ್ಳೆಯ ಉದಾಹರಣೆ. ಲೌವ್ರ್‍ನ ವಾಯುವ್ಯಕ್ಕೆ ಸ್ವಲ್ಪ ದೂರದಲ್ಲಿ 3 ನೆಯ ನೆಪೋಲಿಯನ್ನನ ಕಾಲದಲ್ಲಿ ಅಪಾರ ಖರ್ಚಿನಲ್ಲಿ ನಿರ್ಮಿತವಾದ ಅಪೆರ ಇದೆ. ಅದೊಂದು ದೊಡ್ಡ ಕಟ್ಟಡ. ಲೌವ್ರ್‍ನ ಉತ್ತರಕ್ಕಿರುವ ಅರಮನೆ 162 ಕಾರ್ಡಿನಲ್ ರಿಚಲೂನಿಂದ ನಿರ್ಮಿತವಾಯಿತು. ಅದು ಮುಂದಿನ ಶತಮಾನಗಳಲ್ಲಿ ಅನೇಕ ಪಕ್ಷಗಳ ಮತ್ತು ಪಂಗಡಗಳ ಕಾರ್ಯ ಸ್ಥಾನವಾಗಿತ್ತು. ನಗರ ಸಭಾಂಗಣ ಉತ್ತರ ದಂಡೆಯ ಮೇಲೆ ನಾಟ್ರ್ ಡೇಮ್ ಆರಾಧನಾ ಮಂದಿರದ ಉತ್ತರಕ್ಕಿದೆ. ಈಗಲೂ ನಗರದ ವ್ಯವಹಾರ ಈ ಕಟ್ಟಡದಲ್ಲಿ ನಡೆಯುತ್ತದೆ. ನಗರದ ದ್ವೀಪದಲ್ಲಿರುವ ನ್ಯಾಯ ಸೌಧ ಪ್ಯಾರಿಸಿನ ಪೋಲಿಸ್ ಖಾತೆ ಮತ್ತು ನ್ಯಾಯಿಕ ವ್ಯವಸ್ಥೆಯ ಮುಖ್ಯ ಸ್ಥಳ. ಹೋಟೆಲ್ ಡಿಯ ನಗರದ ದ್ವೀಪದ ಇನ್ನೊಂದು ಪುರಾತನ ಕಟ್ಟಡ. ಲೂಕ್ಸೆಂಬರ್ಗ್ ಅರಮನೆ ಸೇನ್ ನದಿಯ ದಕ್ಷಿಣಕ್ಕಿದೆ. 17 ನೆಯ ಶತಮಾನದ ಆದಿಯಲ್ಲಿ ನಿರ್ಮಿತವಾದ ಈ ಕಟ್ಟಡದಲ್ಲಿ ಫ್ರಾನ್ಸಿನ ಮೇಲ್ಮನೆಯ ಸಭೆ ಸೇರುತ್ತದೆ. ಬೂರ್ಬನ್ ಅರಮನೆಯಲ್ಲಿ ಕೂಡುತ್ತದೆ. ಸೇಂಟ್ ಜಿನಿವಿವ್ ಗುಡ್ಡದ ಮೇಲೆ ಪ್ರಸಿದ್ಧ ಪುರುಷರ ಸ್ಮಾರಕ ಮಂದಿರವಿದೆ. ಒಂದು ಕಾಲದಲ್ಲಿ ಇದೊಂದು ಚರ್ಚ್ ಆಗಿತ್ತು. ಇಲ್ಲಿ ಜೀನ್ ಚಾóಕ್ಯೂಸ್ ರೂಸೋ, ವಾಲ್ಟೇರ್ ವಿಕ್ಟರ್ ಹ್ಯೂಗೋ ಮೊದಲಾದ ಪ್ರಸಿದ್ಧ ವ್ಯಕ್ತಿಗಳ ಗೋರಿಗಳಿವೆ. ಪ್ಯಾರಿಸ್‍ನಲ್ಲಿ ಅನೇಕ ಸುಪ್ರಸಿದ್ದ ಕ್ರೈಸ್ತ ಚರ್ಚ್‍ಗಳಿವೆ. ಅವುಗಳಲ್ಲಿ ನಾಟ್ರ್ ಡೇಮ್ ಅತ್ಯಂತ ಪ್ರಸಿದ್ಧವಾದ್ದು. 12 ನೆಯ ಮತ್ತು 13 ನೆಯ ಶತಮಾನಗಳಲ್ಲಿ ಗಾತಿಕ್ ಶೈಲಿಯಲ್ಲಿ ನಿರ್ಮಿತವಾದ ಈ ಕಟ್ಟಡವನ್ನು 19 ನೆಯ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಇದು ನಗರದ ದ್ವೀಪದ ಮೇಲೆ ಹೋಟೆಲ್ ಡಿಯುದ ಎದುರಿಗಿದೆ ಮತ್ತು ಅದರ ಘನತೆ, ನಕಾಸೆ ಕೆಲಸ ಮತ್ತು ಗಂಟೆ ಪ್ರಸಿದ್ಧವಾದವು. ಕನ್‍ಕಾರ್ಡ್ ಚೌಕದ ಎದುರಿಗಿರುವ ಮ್ಯಾಡೆಲಿನ್ ಚರ್ಚು ನೆಪೋಲಿಯನ್ನನ ಕಾಲದಲ್ಲಿ ನಿರ್ಮಿತವಾಯಿತು. ಅದು ರೋಮನ್ ದೇವಾಲಯ ಶೈಲಿಯಲ್ಲಿದೆ. ಪವಿತ್ರ ಹೃದಯ ಚರ್ಚ್ ಮಾರ್ಟ್‍ರ್ ಗುಡ್ಡದ ಮೇಲಿದೆ. ಆಪೆರ ಚೌಕದ ಪೂರ್ವಕ್ಕೆ ಸ್ವಲ್ಪ ದೂರದಲ್ಲಿರುವ ಲಾ ಬಾರ್ಸ್ ಬೃಹತ್ ಕಟ್ಟಡದ ಸುತ್ತಮುತ್ತ ನಗರದ ಮುಖ್ಯ ಆರ್ಥಿಕ ಮತ್ತು ವಾಣಿಜ್ಯ ವಿಭಾಗವಿದೆ. ಹಾಲ್ ಸೆಂಟ್ರಲ್ ಮುಖ್ಯ ಮಾರುಕಟ್ಟೆ. 

   	ಕೈಗಾರಿಕೆ: ಪ್ಯಾರಿಸ್ ಫ್ರಾನ್ಸಿನ ಮುಖ್ಯ ಕೈಗಾರಿಕೆ ಮತ್ತು ವಾಣಿಜ್ಯ ನಗರ. ಮೋಟಾರು, ವಿದ್ಯುತ್ ಸಲಕರಣೆ, ರಾಸಾಯನಿಕ, ಔಷಧ, ಸುಗಂಧದ್ರವ್ಯ, ಯಂತ್ರ, ಲೋಹ ಸಾಮಗ್ರಿ ಇವು ಹೆಚ್ಚು ಅಭಿವೃಧ್ಧಿ ಹೊಂದಿರುವ ಕೈಗಾರಿಕೆಗಳು. ಫ್ರಾನ್ಸಿನ ಚಲನಚಿತ್ರಗಳಲ್ಲಿ ಮುಕ್ಕಾಲುಪಾಲು ಇಲ್ಲಿ ತಯಾರಾಗುತ್ತವೆ. ನಗರ ಪ್ರದೇಶದ ಕೆಲವು ವಿಭಾಗಗಳ ಪೈಕಿ ಒಂದೊಂದರಲ್ಲಿ ಒಂದೊಂದು ಕೈಗಾರಿಕೆ ಮುಖ್ಯವಾಗಿದೆ. ಇಲ್ಲಿಯ ಕೈಗಾರಿಕೆಗಳು ಪೀಠೋಪಕರಣ, ಭಾರಿ ಲೋಹ ಸಾಮಗ್ರಿ, ಪಾದರಕ್ಷೆ, ಕಣ್ಣಿನ ಉಪಕರಣ, ರೇಡಿಯೊ, ಯಂತ್ರ ಮತ್ತು ಕಚೇರಿ ಸಾಮಗ್ರಿಗಳನ್ನು ಉತ್ಪಾದಿಸುತ್ತವೆ. ಉತ್ತರದ ಉಪನಗರಗಳಲ್ಲಿ ಕೈಗಾರಿಕೆಗಳು ವಿಶೇಷವಾಗಿ ಕೇಂದ್ರೀಕೃತವಾಗಿವೆ. ಸೇಂಟ್ ಡೆನಿಸ್‍ನಲ್ಲಿ ರೈಲುಬಂಡಿ, ಹಡಗು ಮತ್ತು ಕಾರ್ಖಾನೆಗಳ ಸರಂಜಾಮುಗಳ ಭಾರಿ ಕೈಗಾರಿಕೆ ನಡೆಯುತ್ತದೆ. ಪಶ್ಚಿಮ ಮತ್ತು ವಾಯವ್ಯಗಳಲ್ಲಿ ಸೇನ್ ನದಿ ಕಣಿವೆಯಲ್ಲಿ ಕೈಗಾರಿಕೆಗಳು ಬೆಳೆದಿವೆ. ಮೋಟಾರು ಮತ್ತು ವಿಮಾನ, ಯುದ್ಧ ಸಾಮಗ್ರಿ, ಭಾರೀ ಯಂತ್ರೋಪಕರಣ, ರಾಸಾಯನಿಕ ಇವನ್ನು ತಯಾರಿಸುವ ಕಾರ್ಖಾನೆಗಳು ಇಲ್ಲಿವೆ. ದಕ್ಷಿಣ ಮತ್ತು ನೈಋತ್ಯಗಳಲ್ಲಿ ಚರ್ಮ, ಸಿಮೆಂಟ್, ಮಧ್ಯ ಮತ್ತು ತಂಬಾಕಿನ ಕೈಗಾರಿಕೆಗಳಿವೆ. ಲ್ಯಾಟಿನ್ ವಿಭಾಗದಲ್ಲಿ ವಿಶೇಷವಾಗಿ ಮುದ್ರಣ ಮತ್ತು ಪ್ರಕಾಶನ ನಡೆಯುತ್ತವೆ. ಪ್ಯಾರಿಸ್ ಪ್ರದೇಶದ ಒಳಸ್ತರದ ಮಣ್ಣು ಕಟ್ಟಡಗಳ ನಿರ್ಮಾಣ ಸಾಮಗ್ರಿಗಳ ತಯಾರಿಕೆಗೆ ಯೋಗ್ಯವಾಗಿದೆ. ಪ್ರವಾಸಿಗಳಿಗೆ ಆಹಾರ, ಪಾನೀಯ, ಮತ್ತು ಮನೋರಂಜನೆಗಳನ್ನು ಒದಗಿಸುವುದು ಪ್ಯಾರಿಸ್ ನಗರದ ಒಂದು ಮುಖ್ಯ ಉದ್ಯೋಗ. ಆಭರಣ, ಉಡುಪು, ತುಪ್ಪುಳು, ಗಡಿಯಾರ, ಕಸೂತಿ, ಚಿತ್ರ, ನೇಯ್ದಬಟ್ಟೆ, ಕೈಚೀಲ, ಪಿಂಗಾಣಿ ಮತ್ತು ಗಾಜಿನ ಸಾಮಾನು ಇವು ಇಲ್ಲಿಯ ಇನ್ನು ಕೆಲವು ಕೈಗಾರಿಕೆಗಳು. 

   	ಸಾರಿಗೆ: ಅಂತರ್ಭೂ ರೈಲು, ಬಸ್ಸು ಮತ್ತು ಕಾರುಗಳು ಸಾರಿಗೆಯ ಸಾಧನಗಳು. ಪ್ರತಿದಿನ ಸಂಚರಿಸುವ ಸುಮಾರು 20 ಲಕ್ಷ ಜನರ ಪೈಕಿ 9 ಲಕ್ಷ ಜನರು ಉಪನಗರಗಳಿಂದ ಬರುತ್ತಾರೆ. ಅವರಲ್ಲಿ ಸುಮಾರು 3.34 ಲಕ್ಷ ಜನರು ರೈಲಿನಲ್ಲೂ ಸುಮಾರು 2.71 ಲಕ್ಷ ಜನರು ಕಾರುಗಳೇ ಮುಂತಾದ ವಾಹನಗಳಲ್ಲೂ ಬರುತ್ತಾರೆ. ಉಳಿದವರು ನಗರದ ಸಮೀಪದ ಸ್ಥಳಗಳಿಂದ ಅಂತರ್ಭೂ ರೈಲು ಮತ್ತು ಬಸ್ಸುಗಳಲ್ಲಿ ಬರುತ್ತಾರೆ. ನಗರದ ಸುತ್ತ ವೇಗ ಸಂಚಾರದ ವರ್ತುಲ ಮಾರ್ಗವೊಂದು ಇದೆ. ಐದು ಮುಖ್ಯ ರೈಲು ಮಾರ್ಗಗಳು ಈ ನಗರಗಳಿಂದ ಹೊರಡುತ್ತವೆ. ಇದು ಯೂರೋಪಿನ ಸಾರಿಗೆಯ ಒಂದು ಪ್ರಮುಖ ಕೇಂದ್ರ. ಪ್ಯಾರಿಸಿಗೆ ಫ್ರಾನ್ಸಿನ ಉಳಿದ ಭಾಗಗಳು ಮತ್ತು ಯೂರೋಪ್ ಹಾಗೂ ಮಧ್ಯ ಪೂರ್ವದ ದೇಶಗಳೊಂದಿಗೆ ಸಂಪರ್ಕವೊದಗಿಸುವ ಮುಖ್ಯ ರೈಲುಮಾರ್ಗಗಳಿವೆ. ಇಲ್ಲಿ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. 

ಸಾಂಸ್ಕøತಿಕ ಸಂಸ್ಥೆಗಳು ಮತ್ತು ಸೌಲಭ್ಯಗಳು: ಪ್ರಪಂಚದ ಮುಖ್ಯ ಬೌದ್ಧಿಕ ಕೇಂದ್ರಗಳಲ್ಲೊಂದಾದ ಪ್ಯಾರಿಸಿನಲ್ಲಿ ಸುಮಾರು 60 ನಾಟಕ ಗೃಹಗಳು, 200 ಚಲನಚಿತ್ರ ಮಂದಿರಗಳು ಮತ್ತು 65 ವಸ್ತುಸಂಗ್ರಹಾಲಯಗಳಿವೆ. ಪ್ಯಾರಿಸಿನಲ್ಲಿ ಅನೇಕ ಗ್ರಂಥಾಲಯಗಳೂ, ಶೈಕ್ಷಣಿಕ ಸಂಸ್ಥೆಗಳೂ ಇವೆ. ವೈಜ್ಞಾನಿಕ ಸಂಸ್ಥೆಗಳ ಪೈಕಿ ಪಾಶ್ಚರ್ ಸಂಸ್ಥೆಯ ವೇಧಶಾಲೆ ಮತ್ತು ಇವ್ರಿಯಲ್ಲಿರುವ ಪರಮಾಣು ಅಣು ಶಕ್ತಿ ಸಂಶೋಧನಾಲಯ ಇವು ಮುಖ್ಯವಾದವು. ನಗರದ ಹೊರಗೆ ಹತ್ತಿರದಲ್ಲಿ ಮೂರು ದೊಡ್ಡ ಮನೋರಂಜನೆಯ ಸೌಲಭ್ಯಗಳಿವೆ. ಅವುಗಳಲ್ಲಿ ಅನೇಕ ಕ್ರೀಡೆಗಳಿಗೆ ಅವಕಾಶವಿದೆ. ಅಲ್ಲಿ ಕ್ರೀಡಾರಂಗ, ಹಸಿರು ಮೈದಾನ ಮತ್ತು ತರುಗುಚ್ಛಗಳಿವೆ. 1962 _1970 ರ ಅವಧಿಯಲ್ಲಿ ನಗರದೊಳಗಿನ ಸಾರ್ವಜನಿಕ ಈಜುಕೊಳಗಳ ಸಂಖ್ಯೆ 39 ರಿಂದ 54 ಕ್ಕೆ ಏರಿದೆ.                 			           				(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ